ನಮ್ಮ ದೂರದರ್ಶಿಗಳು
MOKS ನ ಮಾರ್ಗದರ್ಶಕರು ಮತ್ತು ಪ್ರೇರಣೆ

ಸಯ್ಯಿದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ
ಕೇರಳದ ಪ್ರಸಿದ್ಧ ಇಸ್ಲಾಮಿಕ್ ವಿದ್ವಾಂಸರು, ಸೂಫಿ ನಾಯಕರು ಮತ್ತು ಧಾರ್ಮಿಕ ಮಾರ್ಗದರ್ಶಕರಾಗಿದ್ದರು. 'ತಾಜುಲ್ ಉಲಮಾ' (ವಿದ್ವಾಂಸರ ಕಿರೀಟ) ಎಂಬ ಗೌರವ ಬಿರುದನ್ನು ಪಡೆದಿದ್ದರು. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಜಾಮಿಅ ಸಅದಿಯ್ಯಾ ಸೇರಿದಂತೆ ಹಲವು ಧಾರ್ಮಿಕ ಮತ್ತು ಶೈಕ್ಷಣಿಕ ಸಂಸ್ಥೆಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಎಂ.ಎ. ಅಬ್ದುಲ್ ಖಾದಿರ್ ಮುಸ್ಲಿಯಾರ್
ಕೇರಳದ ಪ್ರಸಿದ್ಧ ಇಸ್ಲಾಮಿಕ್ ವಿದ್ವಾಂಸರು, ಶಿಕ್ಷಣತಜ್ಞರು ಮತ್ತು ಧಾರ್ಮಿಕ ನಾಯಕರಾಗಿದ್ದರು. 'ನೂರುಲ್ ಉಲಮಾ' (ವಿದ್ವಾಂಸರ ಬೆಳಕು) ಎಂಬ ಬಿರುದನ್ನು ಪಡೆದಿದ್ದರು. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಹಾಗೂ ಆಲ್ ಇಂಡಿಯಾ ಸುನ್ನಿ ಎಜುಕೇಶನ್ ಬೋರ್ಡ್ನ ಅಧ್ಯಕ್ಷರಾಗಿದ್ದರು. ಜಾಮಿಅ ಸಅದಿಯ್ಯಾ ಅರಬಿಯ್ಯಾ ಸಂಸ್ಥೆಯ ಪ್ರಮುಖ ಸ್ಥಾಪಕರಲ್ಲಿ ಒಬ್ಬರು.

ಅಲಿಕುಂಞ್ಙಿ ಉಸ್ತಾದ್
ಪ್ರವಾದಿ ಪ್ರೇಮವನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡು ಮಾದರಿಯೋಗ್ಯವಾದ ಜೀವನವನ್ನು ತೋರಿಸಿಕೊಟ್ಟು ನಮ್ಮನ್ನು ಬಿಟ್ಟಗಲಿದ ಮಹಾ ಅರಿವಿನ ವಿದ್ಯುತ್ ತೇಜಸ್ಸಾಗಿದ್ದರು. 1935 ರಲ್ಲಿ ಜನಿಸಿದ ಉಸ್ತಾದರು ಪರಂಪರಾಗತ ಮುಕ್ರಿಕ ವಂಶಜರಾಗಿದ್ದರು. ಎಡಕ್ಕಾಡ್, ಒಳಯಂ, ಕುಂಬೋಳ್, ಪರಪ್ಪನಂಜಡಿ, ದಯೂಬಂದ್ ಮುಂತಾದ ಕಡೆಗಳಲ್ಲಿ ಮಹಾ ಗುರುಗಣ್ಯರಿಂದ ಅರಿವನ್ನು ಕರಗತ ಮಾಡಿದ ನಂತರ ಹಲವು ಕಡೆಗಳಲ್ಲಿ ಸೇವೆ ಸಲ್ಲಿಸಿದರು. ಸಮಸ್ತ ಕೇಂದ್ರ ಮುಶಾವರ ಸದಸ್ಯರಾಗಿ, ಉಪಾಧ್ಯಕ್ಷರಾಗಿದ್ದ ಅವರು ಎಂ ಎ ಉಸ್ತಾದ್ ಮತ್ತು ಜಾಮಿಅ ಸಅದಿಯಾದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. 2021 ರಲ್ಲಿ ನಿಧನರಾದರು.

ಪಿ.ಎ. ಉಸ್ತಾದ್
ಪಿ ಎ ಉಸ್ತಾದ್ ಎಂಬ ನಾಮದಲ್ಲಿ ವಿಖ್ಯಾತಗೊಂಡ ಖಾಝಿ ಪಿ ಎ ಅಬ್ದುಲ್ಲಾ ಮೌಲು ಉಸ್ತಾದ್, ಕಣ್ಣೂರು ಜಿಲ್ಲೆಯ ಮಟ್ಟನ್ನೂರಿನಲ್ಲಿ 1923 ಜನಿಸಿ ಪ್ರಾಥಮಿಕ ಶಿಕ್ಷಣವನ್ನು ಪಡೆದರು. ಉನ್ನತ ವ್ಯಾಸಂಗಕ್ಕಾಗಿ ಪೋಕರ್ ಮುಸ್ಲಿಯಾರ್ ಎಂಬ ಮಹಾ ಪಂಡಿತರ ದರ್ಸಿಗೆ ಸೇರಿದರು. ಕರ್ಮ ಶಾಸ್ತ್ರದಲ್ಲಿ ಅಗಾಧ್ಯ ಪಾಂಡಿತ್ಯವಿತ್ತು, ಹಲವು ಭಾಷೆಗಳಲ್ಲಿ ನಿಪುಣತೆ, ಮಹೋನ್ನತ ಅನುವಾದಕ ಹೀಗೆ ಹಲವಾರು ವೈಶಿಷ್ಟತೆಗಳನ್ನು ಹೊಂದಿದ್ದರು. 1982 ರಲ್ಲಿ ಸಅದಿಯಾ ಪ್ರಾಂಶುಪಾಲರಾಗಿ ನಿಯುಕ್ತರಾಗಿ ಸುದೀರ್ಘವಾದ 13 ವರ್ಷಗಳ ಕಾಲ ಸೇವೆಗೈದರು. ಎಂ.ಎ ಉಸ್ತಾದರೊಂದಿಗೆ ಅವಿನಾಭವ ಸಂಬಂಧ ಹೊಂದಿದ್ದರು.

ಎ.ಕೆ. ಉಸ್ತಾದ್
ಜಾಮಿಕ್ ಸಅದಿಯಾ ಪ್ರಾಂಶುಪಾಲರೂ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಉಪಾಧ್ಯಕ್ಷರಾಗಿದ್ದ ಎ.ಕೆ ಉಸ್ತಾದ್ ಎಂದು ಚಿರಪರಿಚಿತಗೊಂಡ ಎ ಕೆ ಅಬ್ಬುರಹ್ಮಾನ್ ಮುಸ್ಲಿಯಾರ್, ಕೋಝಿಕ್ಕೋಡ್ ಜಿಲ್ಲೆಯ ಫರೋಕ್ ಕಾಲೇಜಿಗೆ ಸಮೀಪವಿರುವ ಅಂಡಿಕ್ಕಾಡನ್ ಕುಝಿಯಲ್ಲಿರುವ ಪಂಡಿತ ಕುಟುಂಬದಲ್ಲಿ ಜನಿಸಿದರು. 10ನೇ ವಯಸ್ಸಿನಲ್ಲಿ ತಲಕ್ಕೇರಿ ಮಟ್ಟಾಂಬುರಂ ಎಂಬಲ್ಲಿ ದರ್ಸಿಗೆ ಸೇರಿದರು. 1968 ರಲ್ಲಿ ಪಟ್ಟಿಕ್ಕಾಡ್ ಜಾಮಿಅದಿಂದ ಫೈಝಿ ಪದವಿ ಪಡೆದರು. ಖಗೋಳ ಶಾಸ್ತ್ರದಲ್ಲಿ ವೈಶಿಷ್ಟ ನಿಪುಣತೆಯನ್ನು ಹೊಂದಿದ್ದ ಅವರು 1985ರಲ್ಲಿ ಸಆದಿಯಾದ ಮುದರಿಸರಾಗಿ ನಿಯುಕ್ತಗೊಂಡರು. ಪಿ ಎ ಉಸ್ತಾದರ ನಂತರ ಪ್ರಾಂಶುಪಾಲರಾಗಿ ಸೇವೆಗೈದ ಅವರು 2018ರಲ್ಲಿ ನಿಧನರಾದರು.

ಚಿತ್ತಾರಿ ಉಸ್ತಾದ್
ಚಿತ್ತಾರಿ ಉಸ್ತಾದ್ ಎಂದೇ ಚಿರಪರಿಚಿತವಾದ ಕೆ.ಪಿ ಹಂಝ ಮುಸ್ಲಿಯಾರ್, ಕಣ್ಣೂರು ಜಿಲ್ಲೆಯ ಪಟ್ಟುವಂನಲ್ಲಿ ಜನಿಸಿದರು. ಸಿ ಅಬ್ದುಲ್ಲಾ ಮುಸ್ಲಿಯಾರ್, ಅಬ್ಬಾಸ್ ಮುಸ್ಲಿಯಾರ್, ಕಣ್ಣೀಯತ್ ಉಸ್ತಾದ್ ಮುಂತಾದವರಿಂದ ವಿದ್ಯಾರ್ಜನೆಗೈದ ನಂತರ ಅಲ್ ಮಖರುಸುನ್ನೀ ಅಲ್ ಇಸ್ಲಾಮಿಯ್ಯ ಎಂಬ ಮಹಾ ಸಂಸ್ಥೆಗೆ ಅಡಿಪಾಯ ಹಾಕಿದರು. ಅವರು ಒಬ್ಬ ಮಹಾ ಪಂಡಿತರು, ಪ್ರಗಲ್ಪ ವಾಗ್ಮಿ, ಬರಹಗಾರ, ಸಂಘಟಕರಾಗಿದ್ದರು. ಎರಡುವರೆ ದಶಕಗಳ ಕಾಲ ಕಣ್ಣೂರು ಜಿಲ್ಲಾ ಸಂಯುಕ್ತ ಖಾಝಿಯಾಗಿ ಸೇವೆಗೈದರು. 2018ರಲ್ಲಿ ನಿಧನರಾದರು.

ಬೇಕಲ್ ಉಸ್ತಾದ್
1949 ಫೆಬ್ರವರಿ 27 ರಂದು ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮದಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಮರಿಕ್ಕಳ ಮದ್ರಸದಲ್ಲಿ ಪಡೆದರು. ಅಲಿಕುಂಜಿ ಉಸ್ತಾದ್, ಅಲಂಪಾಡಿ ಉಸ್ತಾದ್, ಮೂಸಾ ಮುಸ್ಲಿಯಾರ್ ಅವರ ಬಳಿ ತಾಜುಲ್ ಉಲಮಾರ ಉಳ್ಳಾಳ್ ದರ್ಸ್ನಲ್ಲಾಗಿತ್ತು ಅವರ ಮುಂದಿನ ಕಲಿಕೆ. 1971ರಲ್ಲಿ ಉನ್ನತ ವ್ಯಾಸಂಗಕ್ಕಾಗಿ ದಯೂಬಂದಿಗೆ ತೆರಳಿದರು. ನಂತರ ಅಧ್ಯಾಪನ ರಂಗದಲ್ಲಿ ಹಲವಾರು ಸ್ಥಳಗಳಲ್ಲಿ ಸೇವೆಯ ನಂತರ ನೂರುಲ್ ಉಲಮಾ ಉಸ್ತಾದರ ವಸಿಯ್ಯತ್ ಪ್ರಕಾರ ಅವರ ವಫಾತಿನ ನಂತರ ಸಅದಿಯಾ ಶರೀಅತ್ ಕಾಲೇಜಿನ ಪ್ರಾಂಶುಪಾಲರಾಗಿದ್ದರು. 24-09-2020ರಲ್ಲಿ ನಿಧನರಾದರು.

ಪೋಸೋಟ್ ತಂಙಳ್
ಎಂ.ಎ ಉಸ್ತಾದರ ಸುಧೀರ್ಘ 10 ವರ್ಷದ ಗುರುವಾಗಿದ್ದ ತ್ರಿಕ್ಕರಿಪುರ್ ಸಯ್ಯದ್ ಶಾಹುಲ್ ಹಮೀದ್ ತಂಬಳರ ಪೌತ್ರನಾಗಿ 1961ರಲ್ಲಿ ಜನಿಸಿದರು. ಕರುವಂತಿರುತಿಯಲ್ಲಿರುವ ತನ್ನ ತಂದೆ ಅಹ್ಮದುಲ್ ಬುಖಾರಿಯ ದರ್ಸಿನಲ್ಲೇ ಪ್ರಾರ್ಥಮಿಕ ಶಿಕ್ಷಣವನ್ನು ಕರಗತಗೊಳಿಸಿದರು. ನಂತರ ಬೀರಾನ್ ಉಸ್ತಾದರೊಂದಿಗೆ ಕೋಡಂಬುಝದಲ್ಲಿ 8 ವರ್ಷದ ದರ್ಸ್ ಕಲಿಕೆಯ ನಂತರ ಉನ್ನತ ವ್ಯಾಸಂಗಕ್ಕಾಗಿ 1981ರಲ್ಲಿ ವೆಲ್ಲೂರ್ ಬಾಖಿಯಾತಿಗೆ ಹೋದರು. ಪಂಡಿತರು, ಸಂಘಟಕರು, ಆತ್ಮೀಯ ನೇತಾರರಾಗಿದ್ದ ಅವರು ಉತ್ತರ ಕೇರಳದ ಮಸ್ಟರ್ ಎಂಬ ಮಹಾ ವಿದ್ಯಾಸಂಸ್ಥೆಗೆ ಶಿಲಾನ್ಯಾಸಗೈದರು. 2015ರಲ್ಲಿ ನಿಧನರಾದರು.

ಖುರ್ರತುಸ್ಸಾದಾತ್ ಕೂರತ್ ತಂಙಳ್
ದಶಕದ ಹಿಂದಿನ ಮಾತು. ಜಾಮಿಅಃ ಸಅದಿಯಾಕ್ಕೆ ಒಂದರ ಮೇಲೊಂದು ಆಘಾತ ಅಪ್ಪಳಿಸಿದ್ದ ಕಾಲ. ಸಂಸ್ಥೆಯ ಸ್ಥಾಪನೆ ಕಾಲದಿಂದಲೂ ಅಧ್ಯಕ್ಷರಾಗಿದ್ದ ತಾಜುಲ್ ಉಲಮಾರ ವಫಾತ್, ಅದಾಗಿ ಒಂದೇ ವರ್ಷದಲ್ಲಿ ಸಂಸ್ಥೆಯ ಸರ್ವವೂ ಆಗಿದ್ದ ನೂರುಲ್ ಉಲಮಾರ ವಿದಾಯ! ಸಅದಿಯಾದ ವಿರಹ ವೇದನೆಯ ವೇಳೆಯಲ್ಲಿ ಸಣ್ಣದೊಂದು ಸಾಂತ್ವನವಾಗಿ ನಿಂತವರು ಖುರತುಸ್ಸಾದಾತ್ ಸಯ್ಯದ್ ಫಝಲ್ ಅಲ್ ಬುಖಾರಿ ಕೂರತ್ ತಂಬಳ್. ತಾಜುಲ್ ಉಲಮಾರ ವಿದಾಯದಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಸಾದಾತ್ ಕುಟುಂಬದ ಅನುಗ್ರಹೀತ ನಾಯಕ ಆಸ್ಸಯ್ಯದ್ ಆಟಕೋಯ ತಂಬಳ್ ಕುಂಬೋಲ್ ಆಯ್ಕೆಯಾದರೆ, ಅವರಿಂದ ತೆರವುಗೊಂಡ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸಿದವರು ಸಯ್ಯದ್ ಕೂರತ್ ತಂಙಳ್. ಒಂದು ದಶಕ ಕಾಲ ಪ್ರಸ್ತುತ ಸ್ಥಾನದಲ್ಲಿದ್ದ ಕೂರತ್ ತಂಙಳ್, ಸಂಸ್ಥೆಯು ಐವತ್ತೈದನೇ ವಾರ್ಷಿಕೋತ್ಸವಕ್ಕೆ ಸಜ್ಜಾಗುವ ಸಂದರ್ಭದಲ್ಲೇ ಐಹಿಕ ಜೀವನಕ್ಕೆ ವಿದಾಯ ಹೇಳಿದ್ದು ನಿಜಕ್ಕೂ ಅತ್ಯಂತ ಆಘಾತಕಾರಿಯಾಗಿತ್ತು.

ಕಲ್ಲಟ್ರ ಅಬ್ದುಲ್ ಖಾದರ್ ಹಾಜಿ
ಕಲ್ಲಟ್ರ ಅಬ್ದುಲ್ ಖಾದರ್ ಹಾಜಿ ಮತ್ತು ಜಾಮಿಯಾ ಸ-ಅದಿಯಾ ಸಂಸ್ಥೆಯ ನಡುವಿನ ನಂಟು ಕೇವಲ ಭೂದಾನಕ್ಕೆ ಸೀಮಿತವಾಗಿರಲಿಲ್ಲ; ಬದಲಿಗೆ ಅವರು ಆ ಸಂಸ್ಥೆಯ ಆತ್ಮ ಮತ್ತು ಮಾರ್ಗದರ್ಶಕರಾಗಿದ್ದರು. 1971 ರಲ್ಲಿ ಈ ಮಹಾನ್ ಸಂಸ್ಥೆಯನ್ನು ಸ್ಥಾಪಿಸಲು ಯೋಜಿಸಿದಾಗ, ಉತ್ತರ ಕೇರಳದ ಹಿಂದುಳಿದ ಮುಸ್ಲಿಂ ಸಮುದಾಯಕ್ಕೆ ಶಿಕ್ಷಣ ಒದಗಿಸುವುದು ಅವರ ಮುಖ್ಯ ಗುರಿಯಾಗಿತ್ತು. ಸಂಸ್ಥೆಯು ಆರಂಭಿಕ ದಿನಗಳಲ್ಲಿ ತೀವ್ರ ಸವಾಲುಗಳನ್ನು ಎದುರಿಸುತ್ತಿದ್ದಾಗ, ಅಬ್ದುಲ್ ಖಾದರ್ ಹಾಜಿ ಅವರು ತಮ್ಮ ಪ್ರಭಾವಿ ರಾಜಕೀಯ ವರ್ಚಸ್ಸನ್ನು ಬಳಸಿ ಸ್ಥಳೀಯ ಮುಖಂಡರನ್ನು ಮತ್ತು ವಿದ್ವಾಂಸರನ್ನು ಒಟ್ಟುಗೂಡಿಸುವಲ್ಲಿ ಯಶಸ್ವಿಯಾದರು. ಸಂಸ್ಥೆಯ ಮೊದಲ ತರಗತಿಗಳನ್ನು ತಮ್ಮ ಸ್ವಂತ ಮನೆಯಲ್ಲೇ ನಡೆಸಲು ಅವಕಾಶ ಮಾಡಿಕೊಡುವ ಮೂಲಕ ಅವರು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ವೈಯಕ್ತಿಕವಾಗಿ ಆಶ್ರಯ ನೀಡಿದ್ದರು. 1983 ರಲ್ಲಿ ಅವರು ನಿಧನರಾಗುವವರೆಗೂ ಸಂಸ್ಥೆಯ ದೈನಂದಿನ ಚಟುವಟಿಕೆಗಳನ್ನು ಮತ್ತು ಆಡಳಿತವನ್ನು ತಮ್ಮ ಉಸ್ತುವಾರಿಯಲ್ಲೇ ನೋಡಿಕೊಳ್ಳುತ್ತಾ, ಸ-ಅದಿಯಾ ಸಂಸ್ಥೆಯು ಇಡೀ ರಾಜ್ಯದಲ್ಲೇ ಒಂದು ದೊಡ್ಡ ಧಾರ್ಮಿಕ ಮತ್ತು ಆಧುನಿಕ ಶಿಕ್ಷಣ ಕೇಂದ್ರವಾಗಿ ಬೆಳೆಯಲು ಭದ್ರವಾದ ಬುನಾದಿ ಹಾಕಿಕೊಟ್ಟರು.